ಆಕಸ್ಮಿಕಗಳ ವಿಮೆ

ವ್ಯಕ್ತಿಗೆ, ಆಸ್ತಿಪಾಸ್ತಿಗಳಿಗೆ ಒದಗಬಹುದಾದ ಎಲ್ಲ ರೀತಿಯ ಆಕಸ್ಮಿಕಗಳ ಪ್ರತಿಯಾಗಿ ಮಾಡುವ ವಿಮೆ. ಇದರಲ್ಲಿ ಕಾನೂನಿಗೆ ಸಂಬಂಧಿಸಿದ, ಕಾಯಿಲೆಗೆ ಸಂಬಂಧಿಸಿದ ಆಕಸ್ಮಿಕಗಳು ಸೇರುತ್ತವೆ. ಇಲ್ಲಿ ವ್ಯಕ್ತಿಗಳಿಗೂ ವಾಣಿಜ್ಯ ಸಂಸ್ಥೆಗಳಿಗೂ ಸಾಮಾನ್ಯ ಜೀವ ವಿಮೆಯಿಂದ ಸಿಗುವುದಕ್ಕಿಂತ ಹೆಚ್ಚಿನ ರಕ್ಷಣೆ ಸಿಗುತ್ತದೆ. ಹದಿನೆಂಟನೆಯ ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ಇಂಗ್ಲೆಂಡ್ ದೇಶದಲ್ಲಿ ಉಂಟಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಆಕಸ್ಮಿಕಗಳ ವಿಮೆ ರೂಪುಗೊಂಡಿತು. ಆಕಸ್ಮಿಕಗಳ ವಿಮೆಯಲ್ಲಿ ಅನೇಕ ವಿಧಗಳಿವೆ. ಇವುಗಳಿಗೆ ಸಂಬಂಧಪಟ್ಟ ಮೂಲತತ್ತ್ವಗಳು ಒಂದೇ ಆಗಿದ್ದರೂ ರಕ್ಷಣೆ ಕೊಡುವ ರೀತಿ ಮತ್ತು ಉದ್ದೇಶ ಪ್ರತಿ ಕಂಪೆನಿಗೂ ಬೇರೆ ಬೇರೆಯಾಗಿರುವುದು. ಮುಖ್ಯವಾಗಿ ಆಕಸ್ಮಿಕಗಳ ವಿಮೆ ನಷ್ಟ ಪರಿಹಾರ ರೂಪದ್ದಾಗಿದೆ.

ವ್ಯಕ್ತಿಗೆ ಸಂಬಂಧಿಸಿದಂತೆ ದೇಹಕ್ಕೆ ಊನವಾದಲ್ಲಿ, ಪ್ರಾಣ ಹೋದಲ್ಲಿ ಅದಕ್ಕೆ ತಕ್ಕಂತೆ ನಷ್ಟ ತುಂಬಿಕೊಡುವ, ಚಿಕಿತ್ಸೆ ಮೊದಲಾದ ಖರ್ಚುಗಳನ್ನು ನಿರ್ವಹಿಸುವ ಏರ್ಪಾಟುಗಳಿವೆ. ಜೊತೆಗೆ ಅಮೆರಿಕದಲ್ಲಿ ವ್ಯಕ್ತಿ ಕೊಡಬೇಕಾದ ಸಾಲಸೋಲಗಳನ್ನು ತಕ್ಕಮಟ್ಟಿಗೆ ತೀರಿಸುವ ರೀತಿಯ ವಿಮೆಯೂ ಇದೆ. 

ಆಕಸ್ಮಿಕಗಳ ವಿಮೆಯಲ್ಲಿ ಮುಖ್ಯವಾದ ಇತರ ಶಾಖೆ ಅವು ಯಾವುವೆಂದರೆ 1 ಮೋಟಾರು ವಾಹನಗಳ ವಿಮೆ; 2 ಕನ್ನಗಳ್ಳತನದಿಂದ ಉಂಟಾದುವುಗಳ ವಿಮೆ; 3 ನಂಬಿಕೆ ಹೊಣೆ ವಿಮೆ; 4 ಇತರರಿಗೆ ಉಂಟಾದ ನಷ್ಟ ಪರಿಹಾರ ವಿಮೆ; 5 ಕೈಗಾರಿಕೆ ವಲಸೆಗಾರರ ಪರಿಹಾರ ವಿಮೆ; 6 ಯಂತ್ರಶಿಲ್ಪ ವಿಮೆ; 7 ಶರೀರದ ಆಕಸ್ಮಿಕಗಳ ವಿಮೆ; 8 ಜಾನುವಾರುವಿಮೆ. ಮೋಟಾರು ವಾಹನಗಳನ್ನು ಕಡ್ಡಾಯವಾಗಿ ವಿಮೆ ಮಾಡುವ ಮಸೂದೆ ಭಾರತದಲ್ಲಿ ಜುಲೈ 1946 ರಲ್ಲಿ ಜಾರಿಗೆ ಬಂತು. ಈ ಮಸೂದೆಯ ಪ್ರಕಾರ ಬೀದಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಪಯೋಗಿಸುವ ಎಲ್ಲ ವಿಧವಾದ ಮೋಟಾರು ವಾಹನಗಳೂ ಆಕಸ್ಮಿಕಗಳಿಗೆ ಒಳಗಾದರೆ ಪರಿಹಾರ ಪಡೆಯಬಹುದು. ಅದಕ್ಕಾಗಿ ವಾಹನ ವಿಮೆಯನ್ನು ಕಡ್ಡಾಯ ಮಾಡಲಾಗಿದೆ.
ಮನೆ, ವ್ಯಾಪಾರದ ಅಂಗಡಿ, ಖಜಾನೆ ಮುಂತಾದ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿ ಅಲ್ಲಿರುವ ಪದಾರ್ಥಗಳನ್ನು ಎತ್ತಿಕೊಂಡು ಹೋಗುವುದಕ್ಕೆ ಕನ್ನಗಳ್ಳತನವೆಂದು ಹೆಸರು. ವಾಸಸ್ಥಳಗಳು, ವ್ಯಾಪಾರಕೇಂದ್ರಗಳು, ಬ್ಯಾಂಕುಗಳು, ಅಂಗಡಿಗಳು, ಷೆಡ್ಡುಗಳು, ಗ್ಯಾರೇಜುಗಳು ಈ ಎಲ್ಲ ಸ್ಥಳಗಳಲ್ಲೂ ನಡೆಯುವ ಕನ್ನಗಳ್ಳತನದಿಂದ ಉಂಟಾಗುವ ನಷ್ಟಗಳ ಪರಿಹಾರಕ್ಕೆ ಕನ್ನಗಳ್ಳತನ ವಿಮಾಪತ್ರಗಳನ್ನು ತೆಗೆದುಕೊಳ್ಳಬಹುದು.

ಒಬ್ಬ ಯಜಮಾನನಿಗೆ ಅಥವಾ ಒಂದು ಕೈಗಾರಿಕೆಯ ಮುಖ್ಯಾಧಿಕಾರಿಗೆ ಅವರ ಹತ್ತಿರ ಕೆಲಸ ಮಾಡುವವರ ಅಪ್ರಾಮಾಣಿಕತೆ, ವಿಶ್ವಾಸಘಾತುಕತನ ಇವುಗಳಿಂದ ಉಂಟಾಗುವ ನಷ್ಟಗಳಿಗೆ ಪರಿಹಾರ ಕೊಡುವ ವಿಮೆಗೆ ನಂಬಿಕೆ ಹೊಣೆವಿಮೆ ಎಂದು ಹೆಸರು. ಈ ವಿಧವಾದ ವಿಮೆ ಆಕಸ್ಮಿಕಗಳ ವಿಮೆಯಲ್ಲಿ ಅತ್ಯಂತ ಪುರಾತನವಾದದ್ದು (1840).

ಒಬ್ಬ ಮನುಷ್ಯ ಅಥವಾ ಒಂದು ಸಂಸ್ಥೆ, ಸಂಘ, ಕೂಟ ಇವುಗಳಿಂದ ಇತರರಿಗೆ ಉಂಟಾಗುವ ಆಕಸ್ಮಿಕ ಮತ್ತು ಇತರರ ಸ್ವತ್ತಿಗೆ ಆಗುವ ನಷ್ಟ ಮುಂತಾದುವುಗಳಿಗೆ ಪರಿಹಾರ ದೊರಕುತ್ತದೆ. ಒಬ್ಬ ಜಮೀನುದಾರನ ದನಕರುಗಳು ಮಗ್ಗುಲ ಜಮೀನುಗಳ ಫಸಲನ್ನು ತಿನ್ನುವುದು ಅಥವಾ ನಾಶಮಾಡುವುದು. ಬಂದೂಕ ಮತ್ತು ತುಪಾಕಿ ಉಪಯೋಗಿಸುವುದನ್ನು ಹೇಳಿಕೊಡುವ ಸಂಘದ ಅಚಾತುರ್ಯದಿಂದ ಇತರರಿಗೆ ಆಗುವ ನಷ್ಟಗಳು, ಒಂದು ನಿವಾಸದ ಹೊಟೇಲು ಮಾಲೀಕನ ಮತ್ತು ಅಲ್ಲಿಯ ಕೆಲಸಗಾರರ ಅಸಡ್ಡೆಯಿಂದ ಅಲ್ಲಿ ತಂಗಲು ಬರುವ ಮನುಷ್ಯರಿಗೆ ಉಂಟಾಗುವ ನಷ್ಟಗಳು- ಪಾಶ್ಚಾತ್ಯ ದೇಶಗಳಲ್ಲಿ ಇಂಥ ಅನೇಕ ಸಂದರ್ಭಗಳಲ್ಲಿ ವಿಮೆಯ ರಕ್ಷಣೆ ದೊರೆಯುತ್ತದೆ.

ಕೈಗಾರಿಕೆಗಳ ಮುಖ್ಯಸ್ಥರು ಕೆಲಸಗಾರರ ಪರಿಹಾರ ವಿಮೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂಬ ಕಾನೂನು ಭಾರತದಲ್ಲಿ 1923 ರಲ್ಲಿ ಜಾರಿಗೆ ಬಂತು. ಕೈಗಾರಿಕೆಗಳು, ವಾಣಿಜ್ಯ ಮತ್ತು ಇತರ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ಕೆಲಸ ಮಾಡುವುದರ ಫಲವಾಗಿ ಆಗುವ ಆಕಸ್ಮಿಕಗಳು, ಕಾಯಿಲೆಗಳು, ಮರಣ ಇವುಗಳಿಗೆ ಪರಿಹಾರವನ್ನು ಕೊಡಲು ಈ ವಿಧವಾದ ವಿಮೆ ಸಹಕಾರಿಯಾಗಿದೆ.

ಆಂಗ್ಲ ದೇಶದಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಯಂತ್ರಗಳ ಉಪಯೋಗ ಹೆಚ್ಚಾದುದರಿಂದ ಯಂತ್ರಶಿಲ್ಪ ವಿಮೆ ಪ್ರಾರಂಭವಾಯಿತು. ಉಪಯೋಗಿಸುತ್ತಿರುವಾಗ ಯಂತ್ರಗಳು ಅಕಸ್ಮಾತ್ತಾಗಿ ಮುರಿಯುವುದರಿಂದ ಇತರರ ಶರೀರಕ್ಕೆ ಆಗುವ ಆಕಸ್ಮಿಕಗಳು ಮತ್ತು ಸ್ವತ್ತುಗಳಿಗೆ ಉಂಟಾಗುವ ನಷ್ಟಗಳು- ಇವುಗಳಿಗೆ ಪರಿಹಾರ ಕೊಡುವುದಕ್ಕೆ ಈ ವಿಮೆ ಅನುಕೂಲವಾಗಿದೆ. ಅಂಥ ಸಂದರ್ಭಗಳಲ್ಲಿ ಕೆಲಸಗಾರರಿಗೆ ಆಗುವ ನಷ್ಟವನ್ನಂತೂ ಸಂಸ್ಥೆ ಕೊಡಬೇಕಾದುದು ಅಗತ್ಯ. ಜನಗಳು ಕೆಲಸ ಕಾರ್ಯಗಳಲ್ಲಿ ತೊಡಗಿದಾಗ ಶರೀರಕ್ಕೆ ಆಕಸ್ಮಿಕಗಳು ಸಂಭವಿಸಿ ಪೆಟ್ಟುಬಿದ್ದು ತೊಂದರೆಗೆ ಈಡಾದರೆ ಪರಿಹಾರ ಕೊಡುವ ವಿಮಾ ಒಪ್ಪಂದಕ್ಕೆ ಶರೀರ ಆಕಸ್ಮಿಕಗಳ ವಿಮೆ ಎಂದು ಹೆಸರು. ಜೊತೆಗೆ ರೋಗ ಬಂದು ಕಾಯಿಲೆಯಾದರೆ ಅದಕ್ಕೆ ವೈದ್ಯ ಚಿಕಿತ್ಸೆ ಪಡೆಯಲು ಉಂಟಾಗುವ ಖರ್ಚಿಗೆ ಪರಿಹಾರ ಪಡೆಯಲು ವಿಮೆ ಮಾಡಬಹುದು. 

  	ನಾರ್ವೆ ಮತ್ತು ಡೆನ್ಮಾರ್ಕ್ ದೇಶಗಳಲ್ಲಿ ಜಾನುವಾರು ವಿಮೆಯನ್ನು ಕಡ್ಡಾಯವಾಗಿ ಮಾಡುವ ಪದ್ಧತಿ ವಾಡಿಕೆಯಲ್ಲಿದೆ. ಅವಕ್ಕೆ ಬರುವ ರೋಗಗಳು, ಅವುಗಳ ಮರಣಗಳಿಂದ ಮಾಲೀಕನಿಗೆ ಆಗುವ ನಷ್ಟಗಳಿಗೆ ಪರಿಹಾರ ಕೊಡುವ ವಿಮೆಗೆ ಜಾನುವಾರು ವಿಮೆ ಎಂದು ಹೆಸರು. ಜೀವನ ಸಂಕೀರ್ಣವಾದಷ್ಟು ಆಕಸ್ಮಿಕಗಳು ಹೆಚ್ಚುವ ಕಾರಣ ಆಧುನಿಕ ಬೃಹತ್ ನಗರಗಳು ಬೆಳೆದಂತೆಲ್ಲ ಈ ಬಗೆಯ ವಿಮೆಯ ಪ್ರಾಶಸ್ತ್ಯ ಹೆಚ್ಚುತ್ತಿದೆ. 									 
(ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ